ಕ್ಯಾಸ್ಪಿಯನ್ ಸಮುದ್ರ	

ಒಳನಾಡಿನ ಉಪ್ಪುನೀರಿನ ಸರೋವರಗಳ ಪೈಕಿ ಅತ್ಯಂತ ದೊಡ್ಡದು. ಯೂರೋಪ್ ಮತ್ತು ಏಷ್ಯಗಳ ನಡುವೆ ಉ.ಅ. 370-470 ಮತ್ತು ಪೂ.ರೇ.470-550ಗಳ ಮಧ್ಯೆ ಇದೆ. ದಕ್ಷಿಣೋತ್ತರವಾಗಿ 746 ಮೈ.ಉದ್ದ ಮತ್ತು ಪೂರ್ವಪಶ್ಚಿಮವಾಗಿ 100-270 ಮೈ. ಅಗಲ ಇದೆ. 1830-1929ರಲ್ಲಿ ಇದರ ಸರಾಸರಿ ಮಟ್ಟ ಸಮುದ್ರಮಟ್ಟಕ್ಕಿಂತ 84' ಕೆಳಗೆ ಇತ್ತು. ಆಗ ಇದರ ವಿಸ್ತೀರ್ಣ 1,69,300 ಚ.ಮೈ. 1929-1956ರಲ್ಲಿ ಇದರ ಮಟ್ಟ ಸಮುದ್ರ ಮಟ್ಟದಿಂದ 92' ಕೆಳಕ್ಕೆ ಇಳಿಯಿತು. ವಿಸ್ತೀರ್ಣ 1,52,000 ಚ.ಮೈ.ಗೆ ಕುಗ್ಗಿತು. ಇದು ಕಾಕಸಸ್ ಮತ್ತು ಮಧ್ಯ ಏಷ್ಯಗಳ ನಡುವೆ ಇರುವ ಅವನತ ಪ್ರದೇಶದ ಅತ್ಯಂತ ತಗ್ಗಿನ ಪ್ರದೇಶದಲ್ಲಿದೆ. ಇದು ಹಿಂದೆ ಭೂಮಧ್ಯ ಸಮುದ್ರವಾಗಿತ್ತು.

ಕ್ಯಾಸ್ಟಿಯನ್ ಸಮುದ್ರತೀರದ ಒಟ್ಟು ಉದ್ದ 4,000 ಮೈ. ಇದರಲ್ಲಿ 3,350 ಮೈ.ಗಳ ತೀರ ಸೋವಿಯೆತ್ ಒಕ್ಕೂಟದಲ್ಲೂ ಉಳಿದದ್ದು ಇರಾನಿನಲ್ಲೂ ಇವೆ. ಇದರ ದಡಗಳು ಸಾಮಾನ್ಯವಾಗಿ ತಗ್ಗಾಗಿವೆಯಲ್ಲದೆ, ಕ್ಯಾಸ್ಪಿಯನ್ ಸಮುದ್ರದ ನೀರಿನ ಅಲೆಗಳ ಹೊಡೆತದಿಂದ ರಾಶಿಯಾದ ಮರಳು ಜೇಡಿಮಣ್ಣುಗಳಿಂದ ಕೂಡಿದೆ. ವೋಲ್ಗಾ ನದೀಮುಖಜಭೂಮಿಯ ಬಳಿ ಅನೇಕ ನಾಲೆಗಳ ಮತ್ತು ಲಗೂನ್‍ಗಳ ಬಿರುಸಿನ ಪ್ರಭಾವದಿಂದಾಗಿ ಅಲ್ಲಿಯ ತೀರಲಕ್ಷಣ ಉಳಿದೆಡೆಗಳಿಗಿಂತ ಭಿನ್ನವಾದ್ದು.

ಕ್ಯಾಸ್ಪಿಯನ್ ಸಮುದ್ರದ ಜಲಾನಯನ ಪ್ರದೇಶದ ವಿಸ್ತೀರ್ಣ 14,41,331 ಚ.ಮೈ. ಇದನ್ನು ಸೇರುವ ನದೀಜಲದಲ್ಲಿ ಸೇ.80ರಷ್ಟು ನೀರು ಉತ್ತರದ ವೋಲ್ಗಾದಿಂದ ಲಭ್ಯವಾಗುತ್ತದೆ. ಯೂರಲ್, ಟೆರೆಕ್, ಸೂಲಾಕ್, ಸಾಮೂರ್, ಕುರಾ, ಆರಾಸ್, ಸಫಿದ್ ರುದ್ ಮತ್ತು ಅಟ್ಟಾಕ್-ಇವು ಈ ಸಮುದ್ರವನ್ನು ಸೇರುವ ಇತರ ನದಿಗಳು, ಕ್ಯಾಸ್ಪಿಯನ್ ಸಮುದ್ರದ ಮಟ್ಟ ಮೊದಲು ಕಪ್ಪು ಸಮುದ್ರದಷ್ಟೇ ಇತ್ತು. ಕಾಕಸಸ್ ಪರ್ವತವ್ಯವಸ್ಥೆ ಮೇಲೇಳುವ ಮೊದಲು ಇವೆರಡು ಸಮುದ್ರಗಳಿಗೂ ಸಂಬಂಧವಿತ್ತು. ಕ್ಯಾಸ್ಪಿಯನ್ ಸಮುದ್ರದ ಸರಾಸರಿ ಲವಣತ್ವ 13\1000. ವಿಶ್ವದ ಸಾಗರಗಳ ಸರಾಸರಿ ಲವಣತ್ವ 35/1000. ಕ್ಯಾಸ್ಪಿಯನ್ ಸಮುದ್ರದ ಲವಣ ರಾಸಾಯನಿಕ ಸಂಯೋಜನೆ ಅದನ್ನು ಸೇರುವ ನದಿಗಳಿಂದ ಪ್ರಭಾವಿತವಾಗಿದೆ.

ಸೋವಿಯೆತ್ ಒಕ್ಕೂಟದ ಅರ್ಥವ್ಯವಸ್ಥೆಯಲ್ಲಿ ಕ್ಯಾಸ್ಪಿಯನ್ ಸಮುದ್ರದ ಪಾತ್ರ ದೊಡ್ಡದು. ಇರಾನಿನ ಅರ್ಥವ್ಯವಸ್ಥೆಯಲ್ಲೂ ಇದರ ಪಾತ್ರ ತಕ್ಕ ಮಟ್ಟಿನದು. ಮತ್ಸ್ಯೋದ್ಯಮ ಮತ್ತು ಜಲಸಾರಿಗೆ ದೃಷ್ಟಿಯಿಂದ ಇದು ಮುಖ್ಯವಾಗಿದೆ. ಸಮುದ್ರದ ನೀರಿನ ಮಟ್ಟ ಇಳಿದಿರುವುದರಿಂದ ಇವೆರಡರ ಮೇಲೂ ತೀವ್ರ ದುಷ್ಪರಿಣಾಮವುಂಟಾಗಿದೆ. ವೋಲ್ಗಾ ನದೀಮುಖಜಭೂಮಿಯ ಬಳಿಯ ಆಳವಿಲ್ಲದ ಭಾಗದಲ್ಲಿದ್ದ ಮತ್ಸ್ಯಸಂಪತ್ತಿಗೆ ಇದರಿಂದ ನೇರ ಆಘಾತವುಂಟಾಗಿದೆ. ನೀರಿನ ಮಟ್ಟ ಇಳಿದಾಗ ಮೀನುಗಾರರ ಅನೇಕ ಹಳ್ಳಿಗಳು ತೀರದಿಂದ ದೂರವಾದವಾಗಿ ಅವನ್ನು ಸ್ಥಳಾಂತರಿಸಬೇಕಾಯಿತು. ಬಂದರುಗಳು ಮರಳಿನಿಂದ ತುಂಬಿದುವು. ಬಂದರನ್ನು ಆಳಗೊಳಿಸುವುದಾದರೂ ರೇವು ಸ್ಥಾವರಗಳನ್ನು ಬೇರೆಡೆಗೆ ಬದಲಿಸುವುದೂ ಅಗತ್ಯವಾದುವು.

ಬಾಕೂ, ಮಾಕಾಚ್ಕಾಲಾ, ಆಸ್ಪ್ರಕಾನ್, ಗೂರ್ಯೆಫ್ ಮತ್ತು ಕ್ರಾಸ್ನೊವಾಟ್ಸ್ಕ್ ಇವು ಸೋವಿಯೆತ್ ಪ್ರದೇಶದ ಮುಖ್ಯ ಬಂದರುಗಳು. ಇರಾನಿನ ಬಂದರುಗಳು ಪಾಹ್ಲಾವೀ ಮತ್ತು ಬಾಂದಾರ್ ಷಾಪೂರ್. ಕ್ಯಾಸ್ಪಿಯನ್ ಸಮುದ್ರದ ಸಾರಿಗೆಯಲ್ಲಿ ಅರ್ಧದಷ್ಟು ಬಾಕೂವಿನ ಪಾಲು. ಆಸ್ಟ್ರಕಾನ್ ಮತ್ತು ಕ್ಯಾಸ್ನೋವಾಟ್ಸ್ಕ್‍ಗಳದು ಎರಡು ಮತ್ತು ಮೂರನೆಯ ಸ್ಥಾನಗಳು. 		 (ಆರ್.ಡಿ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ